ಡಿಜಿಟಾಲಿಸ್
ಸ್ಕ್ರಾಪ್ಯುಲೇರಿಯೇಸೀ ಕುಟುಂಬಕ್ಕೆ ಸೇರಿದ ಔಷಧಿ ಸಸ್ಯ.  ಯೂರೋಪ್ ಏಷ್ಯ ಖಂಡಗಳ ಅನೇಕ ಭಾಗಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.  ಅಲ್ಲದೆ ಪ್ರಪಂಚದ ಅನೇಕ ದೆಶಗಳಲ್ಲಿ ಇದನ್ನು ಬೆಳೆಸುವುದುಂಟು.  ಇದರಲ್ಲಿ ಸುಮಾರು 25 ಪ್ರಭೇದಗಳಿವೆ.  ಇವುಗಳಲ್ಲಿ ಪರ್ ಫ್ಯೂರಿಯಾ (ಫಾಕ್ಸ್‍ಗ್ಲಮ್) ಮತ್ತು ಲ್ಯಾನೇಟ (ಗ್ರೇಸಿಯನ್ ಫಾಕ್ಸ್‍ಗ್ಲವ್ ಅಥವಾ ವುಲಿ ಫಾಕ್ಸ್‍ಗ್ಲವ್) ಎಂಬ ಎರಡು ಪ್ರಭೇದಗಳು ಅತಿಮುಖ್ಯವಾಗಿವೆ.

ಪರ್‍ಫ್ಯೂರಿಯಾ ಪ್ರಭೇದ ಸುಮಾರು 1 m.  ಎತ್ತರ ಬೆಳೆಯುವ ದ್ವೈವಾರ್ಷಿಕ ಗಿಡ.  ಕೆಲವು ಪ್ರದೇಶಗಳಲ್ಲಿ ಇದು ಬಹುವಾಷಿಕ ಗಿಡವಾಗಿಯೂ ಬೆಳೆಯುವುದುಂಟು.  ಸಾಧಾರಣವಾಗಿ 1500-2600 m. ಎತ್ತರದ ಪ್ರದೇಶಗಳಲ್ಲಿ ಇದನ್ನು ಬೆಳೆಸಲಾಗುತ್ತದೆ. ಭಾರತದಲ್ಲಿ ಕಾಶ್ಮೀರದ ತನ್ಮಾರ್ಗ್ ಮತ್ತು ಕಿಸ್ತವಾರ್ ಪ್ರದೇಶಗಲ್ಲಿ ಇದನ್ನು ಕಾಣಬಹುದು. ಡಾರ್ಜಿಲಿಂಗಿನ ಮುಂಗ್ಪೂ  ಎಂಬಲ್ಲೂ ನೀಲಗಿರಿ ಬೆಟ್ಟಗಳಲ್ಲೂ ಬೆಳೆಸುತ್ತಿದ್ದರು.  ಈಗ ಈ ಪರದೇಶಗಳಲ್ಲಿ ಡಿಜಿಟಾಲಿಸ್ ಕೃಷಿಯನ್ನು ಕೈಬಿಡಲಾಗಿದ್ದರೂ ಸ್ವಾಭಾವಿಕವಾಗಿ ಅಲ್ಲಲ್ಲಿ ಕೆಲವು ಗಿಡಗಳನ್ನು ಕಾಣಬಹುದು.  ಕಾಶ್ಮೀರದಲ್ಲಿ ಸುಮಾರು 20-25 ವರ್ಷಗಳಿಂದಲೂ ಇದರ ಕೃಷಿ ಇದೆ.   ಪಶ್ಚಿಮ ಹಿಮಾಲಯದ ಇತರ ಭಾಗಗಳಲ್ಲೂ ಬೆಳೆಸುವ ಯತ್ನ ಮಾಡಲಾಗಿದೆ.
ಇದನ್ನು ಬೀಜಗಳ ಮೂಲಕ ವೃದ್ಧಿಸಬಹುದು.  ಮರಳುಮಿಶ್ರಿತ ಭೂಮಿಯಲ್ಲಿ ನೆರಳು ಇರುವ ಕಡೆ ಇದು ಚೆನ್ನಾಗಿ ಬೆಳೆಯುತ್ತದೆ.  ನೆಲವನ್ನು ಹದ ಮಾಡಿ ಗೊಬ್ಬರ ಹಾಕಿ ಬೀಜಗಳನ್ನು ಸಣ್ಣಮರಳಿನೊಡನೆ ಮಿಶ್ರ ಮಾಡಿ ಒಟ್ಲು ಹಾಕಲಾಗುತ್ತದೆ. ಸಸಿಗಳು 5-7ಛಿm. ಎತ್ತರಕ್ಕೆ ಬೆಳೆದಾಗ ಇವನ್ನು ಕಿತ್ತು ಗಿಡದಿಂದ ಗಿಡಕ್ಕೆ 60 ಛಿm. ಅಂತರ ಬಿಟ್ಟು ಪಾತಿಗಳಲ್ಲಿ ನೆಡಲಾಗುವುದು.  ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಒಟ್ಲುಹಾಕಿದ ಗಿಡ ಮಾರನೆಯ ವರ್ಷದ ಏಪ್ರಿಲ್-ಮೇ ತಿಂಗಳಿನಲ್ಲಿ ಹೂಬಿಡುತ್ತದೆ.  ಬೀಜಗಳು ಬಲಿತ ಮೇಲೆ ಗಿಡ ಸತ್ತುಹೋಗುವುದು.  ಎಲೆಗಳೇ ಔಷಧಿ ತಯಾರಿಕೆಗೆ ಬೇಕಾಗುವ ಅಂಗಗಳು.  ಮೊದಲನೆಯ ವರ್ಷದ ಎಲೆಗಳಲ್ಲಿ ಎರಡನೆಯ ವರ್ಷದ ಎಲೆಗಳಲ್ಲಿರುವುದಕ್ಕಿಂತ ಹೆಚ್ಚು ಔಷಧಿ ಪದಾರ್ಥಗಳಿರುವುವು.  ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳಲ್ಲಿ ಮಧ್ಯಾಹ್ನದ ಸಮಯದಲ್ಲಿ ಎಲೆಗಳನ್ನು ಶೇಖರಿಸುವುವು ರೂಢಿಯಲ್ಲಿರುವ ಕ್ರಮ.  ಎರಡನೆಯ ವರ್ಷದಲ್ಲಿ ಹೂ ಬಿಟ್ಟ ಅನಂತರ ಎಲೆಗಳನ್ನು ಶೇಖರಿಸಲಾಗುತ್ತದೆ.  ಗಿಡದ ಬುಡದಲ್ಲಿನ ಮತ್ತು ತುದಿಯಲ್ಲಿನ ಎಲೆಗಳನ್ನು ಬಿಟ್ಟು ಉಳಿದವನ್ನು ಕೀಳುವುದುಂಟು.  ಎಲೆಗಳನ್ನು ಕಿತ್ತ ತತ್‍ಕ್ಷಣವೇ  ಚೆನ್ನಾಗಿ ಒಣಗಿಸಲಾಗುತ್ತದೆ.  ಬಿದಿರಿನಿಂದ ಮಾಡಿದ ತಡಿಕಗಳ ಮೇಲೆ ಎಲೆಗಳನ್ನು ತೆಳುವಾಗಿ ಹರಡಿ ಎಲೆಗಳನ್ನು ಒಣಗಿಸುವುದು ವಾಡಿಕೆ.  ಬಿಸಿಲು ಸಾಕಾಗದ ಜಾಗಗಳಲ್ಲಿ ಒಲೆಗಳ ಮೇಲೆ ಹರಡಿ ಒಣಗಿಸುವುದುಂಟು.  ಆದರೆ ಬಿಸಿಲಿನಲ್ಲಿ ಒಣಗಿಸುವುದೇ ಉತ್ತಮ.  ಒಂದು ಎಕರೆಯಲ್ಲಿ 230-270 ಞg. ಯಷ್ಟು ಒಣಗಿದ ಎಲೆಗಳು ಸಿಗುತ್ತವೆ.  ಹೀಗೆ ಚೆನ್ನಾಗಿ ಒಣಗಿಸಿದ ಎಲೆಗಳನ್ನು ಕೂಡಿಹಾಕಿ, ದೂಳು, ಕಸ ಮುಂತಾದವು ಸೇರದ ಹಾಗೆ ಎಚ್ಚರವಹಿಸಿದ ಹಾಗೆಯೇ ಅಥವಾ ಪುಡಿಮಾಡಿ ಡಬ್ಬಗಳಲ್ಲಿ ಹಾಕಿ ಭದ್ರವಾಗಿ ಮುಚ್ಚಿಡಲಾಗುತ್ತದೆ.  ಎಲೆ ಅಥವಾ ಪುಡಿ ಹಸಿರಾಗಿರುತ್ತದೆ.  ಇದಕ್ಕೆ ಸ್ವಲ್ಪ ವಾಸನೆಯೂ ಕಹಿರುಚಿಯೂ ಇರುತ್ತವೆ.

ಡಿಜಿಟ್ಯಾಲಿಸ್ ಲ್ಯಾನೇಟ ಪ್ರಭೇದ ಕೂಡ ಒಂದು ದ್ವೈವಾರ್ಷಿಕ ಗಿಡ.  ಇದರ ಎತ್ತರವೂ ಸುಮಾರು 1 m. ಇದರ ಎಲೆಗಳು ತಿಳಿಹಸಿರು ಬಣ್ಣದವು.  ಹೂಗಳು ಚಿಕ್ಕವು ಹಾಗೂ ಹಳದಿ ಅಥವಾ ನೇರಳೆ ಬಣ್ಣದವು.
(ಎಂ.ಸಿ.ಆರ್).

ಡಿಜಿಟ್ಯಾಲಿಸ್ ಹೃದ್ರೋಗಕ್ಕೆ ಬಹು ಉಪಯುಕ್ತ ಔಷಧ.  ಇದನ್ನು ಉಪಯೋಗಿಸಿದಾಗ ಹೃದಯಕ್ಕೆ ಬಲ ಮತ್ತು ವಿಶ್ರಾಂತಿ ದೊರಕುತ್ತದೆ.  ಹಿಗ್ಗಿ ದುರ್ಬಲಗೊಂಡಿದ್ದ ಹೃದಯ ಸಹಜ ಗಾತ್ರಕ್ಕೆ ಹಿಂತಿರುಗುವುಲ್ಲದೆ ಸಂಕೋಚನ ವ್ಯಾಕೋಚನಗಳು ಸಕ್ರಮಗೊಂಡು ಧಮನಿಗಳಲ್ಲಿ ರಕ್ತ ಸಾಕಷ್ಟು ಒತ್ತಡದಿಂದ ಪ್ರವಹಿಸುವಂತಾಗುತ್ತದೆ.  ಇದರಿಂದ ಮೂತ್ರೋತ್ಪತ್ತಿ ಸಲೀಸಾಗಿ, ಶೋಭೆಗೆ ಕಾರಣವಾದ ಅಧಿಕ ದ್ರವಾಂಶ ವರ್ಜಿತವಾಗಲು ಸಾಧ್ಯವಾಗಿದೆ.  ಡಿಜಿಟ್ಯಾಲಿಸ್ ಬಹುಶಃ ಮೂತ್ರಪಿಂಡದ ಮೇಲೆ ನೇರವಾಗಿ ಕೆಲಸಮಾಡಲಾರದು.  ಇಂಗ್ಲೆಂಡಿನ ಶ್ರಾಪ್‍ಷೈರಿನ ಒಬ್ಬ ಮುದುಕಿ ಚಿಕಿತ್ಸೆಗಾಗಿ ಉಪಯೋಗಿಸುತ್ತಿದ್ದ ಗೋಪ್ಯ ಔಷಧಿಯಲ್ಲಿ ಸುಮಾರು 20 ವಸ್ತುಗಳಿದ್ದವೆಂದು ಅವುಗಳಲ್ಲಿ ಕ್ರಿಯಾತ್ಮಕವಾದ ವಸ್ತು ಡಿಜಿಟ್ಯಾಲಿಸ್ ಪರ್‍ಪ್ಯೂರಿಯ ಎಲೆಯೇ ಎಂದೂ ಬರ್ಮಿಂಗ್‍ಹ್ಯಾಮಿನ ವಿಲಿಯಮ್ ವಿದರಿಂಗ್ ಎಂಬಾತ ಪತ್ತೆಮಾಡಿದ.  ಒಣಗಿದ ಎಲೆಯ ಚೂರ್ಣಕ್ಕೆ ಡಿಜಿಟ್ಯಾಲಿಸ್ ಎಂದೇ ಹೆಸರಿಟ್ಟು, ಮೂತ್ರವರ್ಧಕ ಗುಣ ಉಳ್ಳದ್ದಾಗಿದ್ದರಿಂದ ಅದನ್ನು ಶೋಭೆಗೆ ಮದ್ದಾಗಿ 1775 ಮೊಟ್ಟಮೊದಲು ಈತ ಉಪಯೋಗಿಸಿದ.

ಡಿಜಿಟ್ಯಾಲಿಸ್ಸಿನಲ್ಲಿರುವ ಡಿಜಿಟಾಕ್ಸಿನ್, ಜಿಟಾಕ್ಸಿನ್ ಮತ್ತು ಜಿಟ್ಯಾಲಿನ್ ಎಂಬ ಮೂರು ಔಷಧವಸ್ತುಗಳಿಗೂ (ಗ್ಲೂಕೊಸೈಡ್ಸ್) ಈ ಗುಣ ಸಮಾನವಾಗಿದೆ.  ಆದರೆ ನೀರಿನಲ್ಲಿ ವಿಲೀನವಾಗುವಿಕೆ, ರಕ್ತಗತವಾಗುವಿಕೆ ಹಾಗೂ ವಿಸರ್ಜನೆ-ಈ ಗುಣಗಳಲ್ಲಿ ಇವು ಮೂರು ಭಿನ್ನವಾಗಿರುವುದರಿಂದ ದೇಹದಲ್ಲಿ ಇವುಗಳ ಕಾರ್ಯವೂ ಸ್ವಲ್ಪ ಬೇರೆ ಬೇರೆಯಾಗಿದೆ.  ಹೃದ್ರೋಗದಲ್ಲಿ ಕಾಣ ಬರುವ ಮಿಡಿತದ ಹೆಚ್ಚಿದ ದರವನ್ನು ಕಡಿಮೆ ಮಾಡುವುದು ಇವುಗಳ ವೈಶಿಷ್ಟ್ಯ.

ಇವು ಬಲ ಹಾಗೂ ವಿಶ್ರಾಂತಿ ಕೊಡುವುದು ಹೃದಯಕ್ಕೆ ಎನ್ನುವುದಕ್ಕಿಂತ ಹೃತ್ಕುಕ್ಷಿಗಳಿಗೆ ಎನ್ನುವುದು ನಿಜ.  ಹೃತ್ಕರ್ಣಗಳು ಎಷ್ಟೇ ವೇಗವಾಗಿ ಮಿಡಿದರೂ ಹೃತ್ಕುಕ್ಷಿಗಳು ಮಾತ್ರ ಅಷ್ಟೇ ವೇಗದಿಂದ ಮಿಡಿಯದಂತೆ ಪ್ರಚೋದನೆಯ ಪ್ರಸಾರವನ್ನು ಡಿಜಿಟ್ಯಾಲಿಸ್ಸಿನ ಗ್ಲೂಕೊಸೈಡುಗಳು ತಡೆಹಿಡಿಯುತ್ತವೆ.   ಎರಡು ಸಂಕುಂಚನಗಳ ನಡುವೆ ವ್ಯಾಕೋಚನಕ್ಕೆ ಕಾಲ ಸಿಕ್ಕುತ್ತದೆ.  ಈ ಕಾಲದಲ್ಲಿ ಹೃತ್ಕುಕ್ಷಿ ಚೆನ್ನಾಗಿ ಚೇತರಿಸಿಕೊಂಡು ಬಲವಾಗಿ ಕೆಲಸಮಾಡಲು ಸಾಧ್ಯವಾಗುತ್ತದೆ.  ಬಹುಶಃ ಡಿಜಿಟ್ಯಾಲಿಸ್ಸು ಹೃದಯದ ಸ್ನಾಯುವಿನ ಮೇಲೂ ನೇರ ಪ್ರಭಾವ ಹೊಂದಿದೆ ಎಂದೂ ತೋರುತ್ತದೆ.  ಇನ್ನೂ ವಿಶೇಷವೆಂದರೆ ಹೃದಯಕ್ಕೇ ರಕ್ತಪೂರೈಕೆ ಹೆಚ್ಚುವುದು.  ಹೃದಯದ ರಕ್ತವಾಹಿನಿಗಳಲ್ಲಿ ರಕ್ತ ಸಂಚಾರ ಹೃದಯ ವಿಕಸಿಸಿರುವಾಗ ಹೆಚ್ಚು.  ಡಿಜಿಟ್ಯಾಲಿಸ್ ಮೇಲೆ ಹೇಳಿರುವಂತೆ ಹೃತ್ಕುಕ್ಷಿಗೆ ಒದಗುವ ವಿಕಾಸವೇಳೆಯನ್ನು ಹೆಚ್ಚಿಸುವುದರಿಂದ ಅದಕ್ಕೆ ರಕ್ತಪೂರೈಕೆಯನ್ನು ಹೆಚ್ಚಿಸಿದಂತಾಗುತ್ತದೆ.  ಇದರಿಂದ ಹೃತ್ಕುಕ್ಷಿಯ ಸಾಮಥ್ರ್ಯ ಹೆಚ್ಚಾಗುತ್ತದೆ.

ಸೋಲುತ್ತಿರುವ ಹೃದಯವುಳ್ಳ ಹೃದ್ರೋಗಿಗಳಿಗೆ ಡಿಜಿಟ್ಯಾಲಿಸ್ ಅಮೃತದಂತೆ.  ಆದರೆ ಉಯೋಗಿಸಬೇಕಾದ ಪರಿಮಾಣ ಡಿಜಿಟ್ಯಾಲಿಸ್ ವಿಷ ಪರಿಣಾಮಗಳನ್ನು ಉಂಟುಮಾಡುವ ಪರಿಮಾಣಕ್ಕಿಂತ ಸ್ವಲ್ಪ ಕಡಿಮೆ ಅಷ್ಟೆ.  ಆದ್ದರಿಂದ ತಡೆದುಕೊಳ್ಳಲಾರದವರಲ್ಲಿ ಹೊಟ್ಟೆತೊಳಸು, ವಾಕರಿಕೆ, ವಮನಗಳುಂಟಾಗಬಹುದು. ದೇಹದಿಂದ ಡಿಜಿಟ್ಯಾಲಿಸ್‍ನ ಗ್ಲೂಕೊಸೈಡ್‍ಗಳು ವರ್ಜಿತವಾಗುವುದು ಬಲು ನಿಧಾನ.  ಆದ್ದರಿಂದ ದೀರ್ಘಕಾಲಿಕ ಉಪಯೋಗದಲ್ಲಿ ಡಿಜಿಟ್ಯಾಲಿಸ್ಸಿನ ಪರಿಣಾಮಗಳು ಕಂಡುಬರುವುದು ಸಾಮಾನ್ಯ.  ಕೆಲವು ವೇಳೆ ದೃಷ್ಟಿ ದೋಷ, ಹೃದಯದ ಮಿಡಿತದಲ್ಲಿ ಅಕ್ರಮಗಳು ಮುಂತಾದ ಅಪಾಯಕರ ಪರಿಣಾಮಗಳುಂಟಾಗುತ್ತವೆ.  ತತ್‍ಕ್ಷಣ ಡಿಜಿಟ್ಯಾಲಿಸ್ ಪ್ರಯೋಗವನ್ನು ನಿಲ್ಲಿಸಿಬಿಡಬೇಕು.
(ಜಿ.ಆರ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ